ಅಮೆಂಬಳ ಕೃಷ್ಣಬಾಯಿಗೊಲಿದ ಪರಬ್ರಹ್ಮ ನಿತ್ಯಾನಂದ (ಭಾಗ:- 2)

ವಿಚಿತ್ರವೆಂದರೆ ಪರಬ್ರಹ್ಮ ನಿತ್ಯಾನಂದರಿಂದ ಮೂವರು ಕೃಷ್ಣಾಬಾಯಿಯವರಿಗೆ ಕೃಪಾಶೀರ್ವಾದ ದೊರೆತಿದೆ. ಮೂವರು ಕೃಷ್ಣಬಾಯಿಯವರು ಅವರಿಗೆ ಅತ್ಯಂತ ಆತ್ಮೀಯರು. ಮಂಜೇಶ್ವರದ ಅನಂತಕೃಷ್ಣರಾಯರ ಮನೆಗೆ ನಿತ್ಯಾನಂದರು ಬಂದಾಗ ಅಲ್ಲಿನ ಕೊಡಿಯಾಲ್ ಕೃಷ್ಣಬಾಯಿ ನಿತ್ಯಾನಂದರ ಸೇವೆ ಮಾಡಿದ್ದರು. ಅವರಿಗೆ ಕಿಣ್ಣಿ ಎಂದು ಕರೆಯುತ್ತಿದ್ದರು. ಒಂದು ದಿನ ಗಣೇಶಪುರಿ ಮುಂಬಯಿಯಲ್ಲಿ ಸ್ಥಿರ ಸಮಾಧಿಯೆಂದು ಕೃಷ್ಣೆಯ ಬಳಿ ಹೇಳಿದ್ದರು. ಹಾಗಾದರೆ ನಮಗೆ ನಿಮ್ಮನ್ನು ನೋಡುವ ಭಾಗ್ಯ ಇಲ್ಲವೇ ಎಂದು ಕೃಷ್ಣಾಬಾಯಿ ಹೇಳಿದಾಗ, ಮುಂದೆ ರಸ್ತೆಗಳಲ್ಲಿ ಕಂಬಗಳನ್ನು ಹಾಕುತ್ತಾರೆ,ಅದಕ್ಕೆ ತಂತಿ ಬಗಿದು ಮನೆ ಮನೆಗೆ ಕಾಜಿನ ಬಲ್ಬು ಹಾಕುತ್ತಾರೆ. ಆ ಬಲ್ಬಿನ ದೀಪದ ಬೆಳಕಿನ ಪ್ರಕಾಶದ ಕಿರಣವೇ ನಾನು, ಬೆಳಕಿನ ರೂಪದಲ್ಲಿ ನಿಮ್ಮ ಮನೆಯಲ್ಲಿ ಸದಾ ಇರುತ್ತೇನೆ ಎಂದಿದ್ದರು.

ಉಡುಪಿ ತೋನ್ಸೆ  ಕೃಷ್ಣಾ ಬಾಯಿಯು ಮತ್ತೊಬ್ಬ ಶಿಷ್ಯೆ. ಒಮ್ಮೆ ಸೀತಾ ಬಾಯಿ, ಕೃಷ್ಣಾಬಾಯಿ ಉಡುಪಿಯ ಅಜ್ಜರ ಕಾಡಿನ ಬಳಿ ಹೋದಾಗ ಕಟ್ಟೆಯ ಮೇಲೆ ನಿತ್ಯಾನಂದರು ಕುಳಿತಿದ್ದರು. ಕೈಯಲ್ಲಿ ಒಂದು ಹಾವನ್ನು ಹಿಡಿದು ಅದರ ಜತೆ ಮಾತಾನಾಡುತ್ತಿದ್ದರು. ಭಗವಾನ್ ನಿತ್ಯಾನಂದರಿಗೆ ಹಾವಿನ ಭಾಷೆ ಬರುತ್ತದೆಯೇ? ಎಂದು ಇವರಿಗೆ ಆಶ್ಚರ್ಯವಾಯಿತು. ತಕ್ಷಣ ಭಗವಾನರು ನಾಗರ ಹಾವಿನ ಜತೆ ಮಾತನಾಡಿ, ನಿನ್ನ ಇನ್ನಿಬ್ಬರು ಎಲ್ಲಿ? ಅಂತ ಕೇಳಿ. ಅವರನ್ನು ಕರೆದುಕೊಂಡು ಬಾ ಎಂದು ಅಜ್ಞಾಪಿಸಿದಾಗ ಆ ನಾಗರ ಹಾವು ಹೋಗಿ ಇನ್ನೆರಡು ನಾಗರ ಹಾವುಗಳನ್ನಿ ಕರೆದು ಕೊಂಡು ಬಂದಿತ್ತು. ಇವರು ಮೂವರುಯೋಗಿಗಳು ಹಾವಿನ ರೂಪದಲ್ಲಿ ಸಾಧನೆ ಮಾಡುತ್ತಾರೆ ಎಂದರಂತೆ.

ಅಮ್ಮೆಂಬಳ ಕೃಷ್ಣಾಬಾಯಿ ಹಾಗೂ ಪಂಢರಿ ಬಾಯಿ ನಾಟಕಕಾರ ರಂಗ ರಾಯರ ಮಕ್ಕಳು ಇವರು ಮದ್ರಾಸ್ಸಿನಲ್ಲಿ ವಾಸಿಸುತ್ತಿದ್ದರು.
ರಂಗರಾಯರು ನಿತ್ಯಾನಂದರ ಪರಮ ಭಕ್ತರು ಅವರು ನಿತ್ಯಾನಂದರ ಭಾವಚಿತ್ರ ಹಾಗೂ ಅವರು ನೀಡಿದ ಪಾದುಕೆಗಳಿಗೆ ದಿನಾ ಪೂಜೆ ಮಾಡಿತ್ತಿದ್ದರು.
ಒಂದು ದಿನ ಅವರ ಮನೆಯ ಉಪ್ಪರಿಗೆಯ ಮೇಲೆ ಯಜ್ಞ ನಡೆಯುತಿತ್ತು. ಆ ಮನೆಯ ಮಾಲಕ ಒಬ್ಬ ಸಿದ್ಧ ಪುರುಷರಿಂದ ಯಜ್ಞ ಯಾಗ ನಡೆಸುತ್ತಿದ್ದರು.
ಆಗ ಯಜ್ಞದ ಶಕ್ತಿ ಬಾಗಿಲಿನಿಂದ ಹೊರಗೆ ಹೋಗುವುದನ್ನು ಅರಿತು ಸಿದ್ಧಪುರುಷರು ಆ ಶಕ್ತಿಗಳ ಹಿಂದೆ ಹೊರಟರು, ಅದು ನೇರವಾಗಿ ರಂಗರಾಯರ ಮನೆಯೊಳಗೆ ಸಾಗುತ್ತಾ ಪರಬ್ರಹ್ಮ ಭಗವಾನ್‌ರ ದೊಡ್ಡ ಭಾವಚಿತ್ರದಲ್ಲಿ ಸೇರುತ್ತಿತ್ತು. ಆಗ ಸಿದ್ಧ ಮಹಾಪುರುಷರು ಭಗವಂತಾ, ನಿತ್ಯಾನಂದಾ, ಪರಬ್ರಹ್ಮ ನನ್ನ ಯಜ್ಞದ ಫಲ ನಿನಗೆ ತಲುಪಿತು. ನಾನು ಧನ್ಯನಾದೆ ಎಂದು ಆನಂದ ಭಾಷ್ಪ ಸುರಿಸಿದಂತೆ.

ಹೀಗೆ ಕೃಷ್ಣಾಬಾಯಿ ಮನೆತನಕ್ಕೆ ನಿತ್ಯಾನಂದರ ಪೂರ್ಣ ಕೃಪೆ ದೊರೆಕಿತ್ತು.

ಕೃಷ್ಣಾಬಾಯಿಯ ಅಕ್ಕ ಪಂಡರಿಬಾಯಿ ಕನ್ನಡ, ತಮಿಳು ಚಿತ್ರರಂಗದ ಖ್ಯಾತನಟಿಯಾಗಿ ಪೌರಾಣಿಕ ಚಿತ್ರಗಳಲ್ಲಿ ನಟಿಸುತ್ತಿದ್ದರು. ಅವರು ಗಣೇಶಪುರಿಗೆ ಹೋಗಿ ನಿತ್ಯಾನಂದರ ದರುಶನ ಪಡೆಯುತ್ತಿದ್ದರು. ಖ್ಯಾತ ನಟಿ ನಟಿಯರನ್ನು ಗಣೇಶಪುರಿಗೆ ಕರೆದುಕೊಂಡು ಹೋಗಿದ್ದರು. ಖ್ಯಾತ ಕನ್ನಡದ ವರನಟ ರಾಜ ಕುಮಾರರಿಗೆ ಕೂಡಾ ಭಗವಾನ್ ನಿತ್ಯಾನಂದರ ಆಶೀರ್ವಾದ ಕೂಡಿಸಿದ್ದರು. ಖ್ಯಾತ ಚಲನಚಿತ್ರ ಸಂಸ್ಥೆಗೆ ವಜ್ರೇಶ್ವರಿ ಕಂಬೈನ್ಸ್ ಅಂತಾ ಭಗವಾನ್ ನಿತ್ಯಾನಂದರು ನಾಮಕರಣ ನೀಡಿದ್ದರು. ನಟಿ ಪಂಡರಿಬಾಯಿಯವರನ್ನು ನಾನು ಮೈಸೂರಿನಲ್ಲಿ ಭೇಟಿಯಾಗಿದ್ದೆ.

ಖ್ಯಾತ ನಿರ್ದೇಶಕ ಎಚ್. ಎಲ್. ಎನ್ ಸಿಂಹ ನಿರ್ದೇಶನದ “ಅನುಗ್ರಹ” ಕನ್ನಡ ಚಿತ್ರದಲ್ಲಿ ನಾನು ಅವರ ಜೊತೆ ಸ್ವಲ್ಪ ದಿನಾ ಮೈಸೂರು  ಪ್ರೀಮಿಯರ್ ಸ್ಟುಡಿಯೋದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಆವಾಗ ಅಶ್ವತ್ಥ ಜತೆ ನಟಿಸುವಾಗ ಪಂಡರಿಬಾಯಿಯರು ಕಾಲಿಗೆ ಹೈ ಹೀಲ್ಡ್ ಚಪ್ಪಲಿ ಹಾಕಿದ್ದರು. ಆ ಸಂದರ್ಭದಲ್ಲಿ ಹಳೇ ಕಾಲದಲ್ಲಿ ಹೈ ಹೀಲ್ಸ್ ಶೂ ಇರಲಿಲ್ಲ ಎಂದು ನಾನು ಪಂಡರಿಬಾಯಿಯವರು ಗಮನಕ್ಕೆ ತಂದಿದ್ದೆ. ಅವರಿಗೆ ತುಂಬಾ ಸಂತೋಷವಾಗಿ ನನಗೆ ಮದ್ರಾಸ್ಸಿನ ಟ್ರಸ್ಟ್ ಪುರಂನ ಪಂಡರೀ ಆಶ್ರಮಕ್ಕೆ ಬರುವಂತೆ ಹೇಳಿದ್ದರು ಹಲವು ವರ್ಷಗಳ ಬಳಿಕ ನಾನು ಅಲ್ಲಿಗೆ ಹೋಗಿದ್ದೆ. ಆಗ ಅವರಿಗೆ ಕಣ್ಣಿನ ಆಪರೇಶನ್ ಆಗಿತ್ತು. ಅವರಿಗೆ ನಮಸ್ಕರಿಸಿದೆ-  “ನಿನಗೆ ಒಳ್ಳೆಯದಾಗುತ್ತೆ ಚಲನಚಿತ್ರ ಬೇಡಾ” ಅಂತ ಬುದ್ದಿವಾದ ಹೇಳಿ ಆಶೀರ್ವಾದ ಮಾಡಿ ಕಳಿಸಿದ್ದರು. ಅವರ ಮುಖಾಂತರ ನಿತ್ಯಾನಂದರೇ ಈ ಸಲಹೆ ಮಾಡಿಸಿದ್ದಿರಬಹುದು.
ಈ ಘಟನೆಯನ್ನು ನಾನು ಕೃಷ್ಣಾಬಾಯಿಯವರಲ್ಲೂ ಹೇಳಿದ್ದೆ.

ಸ್ವಾಮಿ ವಿಜಯಾನಂದರು,
ನಿತ್ಯಾನಂದ ಧ್ಯಾನ ಮಂದಿರ
ಆನಂದಾಶ್ರಮ ಬೇವಿನಕೊಪ್ಪ.

Share it with the world ~