ಶ್ರೀಮತಿ ಕೃಷ್ಣಾಬಾಯಿಗೊಲಿದ ಪರಬ್ರಹ್ಮ ನಿತ್ಯಾನಂದ (Part 1)

ನಾವು ನಿತ್ಯಾನಂದರಿಗೆ ಸ್ವಾಮಿ, ಗುರು, ಪರಶಿವ, ದತ್ತಾವತಾರಿ, ಅವಧೂತ, ಬಡೇಬಾಬಾ, ಎಂದೆಲ್ಲಾ ಕರೆಯುತ್ತೇವೆ. ಆದರೆ ಅವರು ಪೂರ್ಣ ಅವತಾರ, ಅವರು ಪರಬ್ರಹ್ಮವೆಂದು ತಿಳಿಯಲು ಅಮ್ಮೆಂಬಳ ಶ್ರೀಮತಿ ಕೃಷ್ಣಾಬಾಯಿಯವರಿಗೆ ದರುಶನ ನೀಡಿದ ಈ ಘಟನೆ ಸಾಕ್ಷಿ.

ಶ್ರೀಮತಿ ಕೃಷ್ಣಾಬಾಯಿಯವರು ಖ್ಯಾತ ನಟಿ ಪಂಢರಿಬಾಯಿಯವರ ಸಹೋದರಿ. ಇವರ ತಂದೆ ರಂಗರಾವ್ ನಾಟಕ ರಂಗದವರು ಹಾಗೂ ಇವರೆಲ್ಲಾ ಭಗವಾನ್ ನಿತ್ಯಾನಂದರ ಭಕ್ತರು. ಸದ್ಯ ಇವರು ಬೆಂಗಳೂರಿನಲ್ಲಿ ಅವರ ಅಳಿಯ, ನನ್ನ ಗೆಳೆಯ, ವೇಣುಗೋಪಾಲ ಮಂಜೇಶ್ವರರ ಜತೆ ವಾಸ ಮಾಡುತ್ತಾರೆ.

ಇವರ ಮನೆಯಲ್ಲಿ ಭಗವಾನ್ ನಿತ್ಯಾನಂದರು ನೀಡಿದ ಪವಿತ್ರ ಪಾದುಕೆ ಇದೆ. ವೇಣುಗೋಪಾಲ ಮಂಜೇಶ್ವರರು ನನ್ನ ಆತ್ಮೀಯರು. ಅವರ ಜೊತೆ ಪೂಜ್ಯ ಕೃಷ್ಣಾಬಾಯಿಯವರು ನಮ್ಮ ಬೇವಿನಕೊಪ್ಪ ಆಶ್ರಮಕ್ಕೆ ಬಂದಿದ್ದರು. ನಮ್ಮ ನಿತ್ಯಾನಂದರ ಗವಿಯಲ್ಲಿ ಧ್ಯಾನಕ್ಕೆ ಕುಳಿತಾಗ ಅವರಿಗೆ  ನರಸಿಂಹ ದೇವರ ದರುಶನವಾಗಿತ್ತು. ಅವರು ನರಸಿಂಹನ ಆರಾಧನೆ ಹಾಗೂ ನಿತ್ಯಾನಂದರ ಜಪ  ಮಾಡುತ್ತಾ ಇರುತ್ತಾರೆ.

ಇದೇ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಿತ್ಯಾನಂದರ ತುಳಸೀ ಮಾತಾ ಬರೆದ ಆತ್ಮಸ್ಫುರಣ ಹಾಡುಗಳ ಧ್ವನಿ ಸುರುಳಿಯ ರೆಕಾರ್ಡಿಂಗ್ ಪುತ್ತೂರು ನರಸಿಂಹ ನಾಯಕ್‌ರು ನಡೆಸುವ ಸಂದರ್ಭದಲ್ಲಿ ನಾನು ಅದರಲ್ಲಿ  ಭಾಗವಹಿಸಬೇಕಾಯಿತು. ನನಗೆ ಕೃಷ್ಣಾಬಾಯಿ ಮನೆಯಲ್ಲಿರುವ ಭಗವಾನ್ ನಿತ್ಯಾನಂದರ ಪವಿತ್ರ ಪಾದುಕೆಗಳ ದರ್ಶನ ಪಡೆಯುವ ಆಸೆ. ಅವರ ಮನೆಗೆ ಬರುವುದಾಗಿ ವೇಣು ಮಂಜೇಶ್ವರರವರಿಗೆ ಫೋನ್ ಮಾಡಿದ್ದೆ.

ನನಗೆ ನಾಗಪುರಕ್ಕೆ ಹೋಗುವ ಕಾರ್ಯಕ್ರಮವಿರುವುದರಿಂದ ಬೆಂಗಳೂರಿಗೆ ಹೋಗಲು ಸಾಧ್ಯವಾಗಲಿಲ್ಲಾ. ವೇಣುವಿಗೆ ಫೋನ್ ಮಾಡಿ ತಿಳಿಸಿದ್ದೆ.

ಆ ಸಂದರ್ಭದಲ್ಲಿ ಕೃ಼ಷ್ಣಾಬಾಯಿಯವರು ಜಪಮಾಲೆ ಹಿಡಿದು ಧ್ಯಾನಾಸಕ್ತರಾಗಿದ್ದರು..ಅವರಿಗೆ ಭಗವಾನ್ ನಿತ್ಯಾನಂದರು ಪ್ರಕಟವಾಗಿ ವಿಜಯಾನಂದ ಬರುತ್ತಾನೆ ಎಂದಿದ್ದನಲ್ಲಾ ಅವನೊಳಗೆ, ನಿನ್ನೊಳಗೆ ನಿನ್ನ ಮನೆಯೊಳಗೆ ನಾನಿರುತ್ತೇನೆಲ್ಲಾ ನಾನು ಸರ್ವವ್ಯಾಪಿ ಎಂದರು.

ಪರಬ್ರಹ್ಮ ನಿತ್ಯಾನಂದರು ಸರ್ವವ್ಯಾಪಿ, ಅವರ ಭಕ್ತರ ಹೃದಯದಲ್ಲಿ  ಎಲ್ಲಾ ಆತ್ಮಗಳಲ್ಲಿ ಮಣ್ಣಿನ ಕಣ ಕಣಗಳಲ್ಲಿ ಚಿದಾಕಾಶ ರೂಪದಲ್ಲಿರುವವರು, ಅವರು ವಿಶ್ವಾತ್ಮಕ, ನಿತ್ಯ – ಶಾಶ್ವತವಾಗಿರುವ ಪೂರ್ಣ ಪರಬ್ರಹ್ಮ ಎಂಬುದಕ್ಕೆ ಈ ಘಟನೆ ಸಾಕ್ಷಿ.

“ಓಂ ನಮೋ ಭಗವತೇ ನಿತ್ಯಾನಂದಾಯ” ಮಂತ್ರದಲ್ಲಿ ಅಪಾರವಾದ ಶಕ್ತಿಯಿದೆ.

ಮುಂದುವರಿಯುವುದು

  • ಸ್ವಾಮಿ ವಿಜಯಾನಂದ,
  • ಆನಂದಾಶ್ರಮ ಬೇವಿನಕೊಪ್ಪ
Share it with the world ~