ಗುರುಗಳು ಚಿದಾನಂದನನ್ನು ಆನೆಗುಂದಿಗೆ ಕರೆದು ಕೊಂಡು ಹೋಗಿ ಹಠಯೋಗ, ರಾಜಯೋಗದ ರಹಸ್ಯವನ್ನು ಭೋದಿಸಿದರು.ನೀನು ಹಠಯೋಗವನ್ನು ಸಾಧಿಸಬೇಕು ಎಂದು ಅದರ ರಹಸ್ಯವನ್ನು ಹಾಗೂ ಚಕ್ರಗಳ ಕುರಿತು ಸವಿಸ್ತಾರವಾಗಿ ಭೋದಿಸಿದರು.
ಪ್ರಾಣಾಯಾಮವನ್ನು ಕಲಿಸಿ ತಾನು ಬ್ರಹ್ಮ ಸ್ವರೂಪಿ ಎಂಬುದನ್ನು ಅರಿತು “ಹ” ಎಂಬ ಸೂರ್ಯ ಸ್ವರ ಹಾಗೂ “ಠ” ಎಂದರೆ ಚಂದ್ರ ಸ್ವರ ಎಂಬುದನ್ನು ಅರಿತು ಯೋಗ ಸಾಧನೆ ಮಾಡುವುದು ಹಠಯೋಗ ಎಂದರು. ಕ್ರಮವಾಗಿ ಹನ್ನೆರಡು ಪ್ರಾಣಾಯಾಮ ಮಾಡು ಶಕ್ತಿ ಸಂಪಾದನೆ ಮಾಡಿದ ಬಳಿಕ ಅದನ್ನು 24 ಪ್ರಾಣಾಯಾಮಗಳವರೆಗೆ ಮುಂದುವರಿಸಬೇಕು. ಇದು ಮದ್ಯಮ ತರಗತಿಯದು, ಬಳಿಕ ತೀರಾ ಪ್ರಾಣಾಯಾಮ ಮಾಡಲು ಅದು ಉತ್ತಮ ತರಗತಿಯದು, ಹಠ ಯೋಗದ ಮರ್ಮ ತಿಳಿದ ಯೋಗಿಯು ಅತಿಮಾನವನಾಗಿ ದೇವರ ಸಮಾನವೆನಿಸುವವನು.
ಆದರೆ ಗುರುವಿಲ್ಲದೆ ಇದನ್ನು ಮಾಡಬಾರದು. 36ಕ್ಕಿಂತ ಹೆಚ್ಚು ಪ್ರಾಣಾಯಾಮ ಮಾಡಿದರೆ ಬ್ರಹ್ಮ ರಂಧ್ರ ಒಡೆದು ಹೋಗುವ ಸಂಭವವಿದೆ ಎಂದು ಕೂಡಾ ಹೇಳಿದರು.ಯಾವಾಗ ಈ ಮಾರ್ಗದಲ್ಲಿ ಸಾಗಿ ನಯ, ವಿನಯ, ಭಯ, ಭಕ್ತಿಯಿಂದ ಸಾಧನೆ ಮಾಡಿ, ತಾನೇ ತಾನಾಗಿಹ ಯೋಗಿಗೆ ಮಹಾಸಿದ್ದಿಗಳು ಪ್ರಾಪ್ತವಾಗುತ್ತದೆ. ಇದರಿಂದ ಪವಾಡಗಳನ್ನು ಧನ ಸಂಪಾದನೆ ಮಾಡಿ ಲೋಕ ಮಾನ್ಯರಾಗ ಬಯಸುವವರು. ಯೋಗಕ್ಕೆ ಚ್ಯುತಿಯನ್ನು ತಂದು ಯೋಗ ಭ್ರಷ್ಟರೆನಿಸಿ ಕೊಳ್ಳುತ್ತಾರೆ.
“ತದೇವತ್ವಂ ತ್ವಮೇವ ತತ್” ಅಂದರೆ ನೀನೆ ಅದು ಎನ್ನುವ ತತ್ತ್ವವನ್ನು ಅಳವಡಿಸಿ ಕೊಂಡವನೇ ನಿಜವಾದ ಯೋಗಿಯು ಎನ್ನುತ್ತಾ. ರಾಜಯೋಗ ರಹಸ್ಯವನ್ನು, ಅಲ್ಲದೇ ತ್ರಾಟಕ ಮಾಡುವ ವಿಧಾನವನ್ನು ಹೇಳಿ ಕೊಡುತ್ತಾರೆ. ಕಪ್ಪು ಮಿಶ್ರಿತ ನೀಲಿ ಬಣ್ಣದ ಶೂನ್ಯವನ್ನಿಟ್ಟು ಕೊಂಡು. ಅದರಲ್ಲಿ ತನ್ನ ದೃಷ್ಟಿಯನ್ನಿಟ್ಟು ಕೊಂಡು ಹೃದಯ ಮದ್ಯದಲ್ಲಿ ಇಷ್ಟ ದೇವತೆಯ ಸ್ಮರಣೆ ಮಾಡಿದರೆ ಆ ದೇವತೆ ಮುಮುಕ್ಷುವಿನ ಮನಸ್ಸನ್ನು ನಿರ್ಮಲ ಗೊಳಿಸಿ ಸಾಧನೆಯಲ್ಲಿ ವಿಜಯವನ್ನು ದಯ ಪಾಲಿಸುವವಳು ಚಂಚಲತೆ ಹೋಗಲು ಈಸಾಧನೆ ಮಾಡಬೇಕು.ಇನ್ನು ರಾಜಯೋಗದಲ್ಲಿ ಮಂತ್ರ ಮೂಲಕವೂ ಮೌನ ಸಾಧನೆ, ಗುರುವಿನಿಂದ ಶಕ್ತಿಪಾತ ದೀಕ್ಷೆ ಪಡೆಯುವ ಸಾಧನೆ ಇದೆ.
24 ತಾಸುಗಳ ವರೆಗೆ “ಸೋಹಂ” ಎಂಬ ಮಂತ್ರ ಪಠಣೆ ಮಾಡುತ್ತಾ ಕಣ್ಣು ಮುಚ್ಚಿದಾಗ ತೆರೆದಾಗ ಬ್ರಹ್ಮ ಸ್ವರೂಪದಲ್ಲಿಯೇ ಗುರಿಯಿರಬೇಕು. ಅಂದಾಗ ಮಾತ್ರ ಸಮಾಧಿ ಸಿದ್ದಿಸುವುದು. ಅಗ್ನಿಯ ಸ್ವರೂಪದಲ್ಲಿ ಪರಬ್ರಹ್ಮ ಸ್ವರೂಪ ಕಾಣಿಸುವುದು. ಕೊನೆಗೆ ಅಖಿಲ ಬ್ರಹ್ಮಾಂಡದಲ್ಲಿ ತಾನೇ ವ್ಯಾಪಿಸಿರುವೆನೆಂಬ ಭಾವ ದೃಡವಾಗಿ ಜ್ಞಾನದಲ್ಲಿ ತಲ್ಲೀನನಾಗುವುದೇ ಸಮಾಧಿ. ತುದಿ ಮೊದಲು ಗುರಿ ಮುಂತಾದವುಗಳು ಇಲ್ಲದೆ, ಗುರು ಕೃಪೆಯಿಂದ ಯೋಗಿಯು ಸಿದ್ದಾವಸ್ಥೆ ತಲುಪಿ ಜಯಿಸಿ ಪರಬ್ರಹ್ಮ ಸ್ವರೂಪವಾಗಿ ಮತ್ತೆ ಎಂದಿಗೂ ಜೀವಾತ್ಮನಾಗಲಾರನು . ಭಸ್ಮವಾದ ಕಟ್ಟಿಗೆಯು ಮೊದಲಿನ ಸ್ಥಿತಿಗೆ ಹೇಗೆ ಬರಲಾರದೋ ಹಾಗೆಯೇ ಜನನ – ಮರಣ ನೀಗಿ, ಮೂರು ಅವಸ್ಥೆಗಳನ್ನು ಅರಿತು ಕೊಂಡು. ಚಿದ್ರೂಪನಾಗಿ ಸ್ಥೂಲ, ಸೂಕ್ಷ್ಮ ಕಾರಣ ದೇಹಗಳ ಅನುಭವ ಹೊಂದಿ. ನಿತ್ಯಾನಂದವಾಗಿ ಬ್ರಹ್ಮಾನಂದದಲ್ಲಿ ಸದಾ ಜಾಲಾಡುವ ಅವಧೂತ ಇಡೀ ವಿಶ್ವವನ್ನೇ ತೃಣ ಸಮಾನವೆಂದು ಬಗೆಯುತ್ತಾನೆ.
(ಮುಂದುವರಿಯುವುದು)
ಸಂಗ್ರಹ ಸ್ವಾಮಿ ವಿಜಯಾನಂದರು,
ಮೂಲ ಕೃತಿ S.V. ಪಾಟೀಲ ಗುಂಡೂರ ಅವರ “ರಾಜಯೋಗಿ ಶ್ರೀ ಚಿದಾನಂದ ಅವಧೂತರು”.
ಸಂಕಲನ:ಸಿದ್ಧಾರೂಢ ಹಿರೇಮಠ, ನಿತ್ಯಾನಂದ ಧ್ಯಾನ ಮಂದಿರ, ಬೇವಿನಕೊಪ್ಪ.