ಅಧ್ಯಾಯ 16: ಚಿದಾನಂದನಾರ ಸಮಾಧಿ ಸ್ಥಿತಿ

ಚಿದಾನಂದನಿಗೆ ಗುರು ಕೃಪೆಯಿಂದ ಗುರು ಸೇವಾ ಬಲದಿಂದ ನರಜನ್ಮ ತೊರೆದು ಹರ ಜನ್ಮ ಪ್ರಾಪ್ತವಾಯಿತು. ಮಹಾಗುರುಗಳು ಮನದ ಭ್ರಮೆ ಬಿಡಿಸಿ ಹಠಯೋಗ ಜಯಿಸಿದ ಹಾಗೆ ರಾಜಯೋಗ ಜಯಿಸಬೇಕು, ಬಳಿಕ ಏನೂ ಮಾಡಬೇಕಾಗಿಲ್ಲಾ. ಸಹಜಯೋಗ ಪ್ರಾಪ್ತವಾಗುತ್ತದೆ, ಎಂದರು.

ಗುರು ಆಜ್ಞೆಯಂತೆ ಗುರುಗಳು ತೋರಿಸಿದ ಶಿವಾಲಯದ ಗರ್ಭಗುಡಿಯಲ್ಲಿ ಎರಡು ತಿಂಗಳು ಚಿದಾನಂದನು ಧ್ಯಾನಾಸಕ್ತನಾಗಿ ಕುಳಿತನು. ಜನಗಳು ಆಹಾರ, ನೀರು ಇಲ್ಲದೆ ಗರ್ಭಗುಡಿಯೊಳಗೆ ಕುಳಿತ ತಪಸ್ವಿಯನ್ನು ನೋಡಲು ತಂಡೋಪ ತಂಡವಾಗಿ ಬಂದು ಕಿಟಕಿಯ ಮೂಲಕ ದರುಶನ ಪಡೆಯ ತೊಡಗಿದರು.

ಒಂದು ದಿನ ಘಟ ಸರ್ಪವೊಂದು ಗುಡಿಯೊಳಗೆ ಹೊಕ್ಕು ಈಶ್ವರ ಲಿಂಗದ ಮೇಲೆರಿ ಚಿದಾನಂದನ ತಲೆಗೆ, ಕೊರಳಿಗೆ ಸುತ್ತು ಹಾಕಿ ಕುಳಿತಿತ್ತು.ವಿಷಯ ಕಂಪ್ಲಿಯ ಶೆಟ್ಟರ ತಿಮ್ಮಣ್ಣನಿಗೆ ತಿಳಿದು ತಕ್ಷಣ ತಡ ಮಾಡದೆ ಸದ್ಗುರು ಅವಧೂತ ಕೊಂಡಪ್ಪ ಗುರುಗಳನ್ನು ಕರೆದುಕೊಂಡು ಬಂದನು. ಕಂಪ್ಲಿಯ ಗುಡಿಯೊಳಗೆ ಹೊಕ್ಕು ಗುರುಗಳು ಶಿಷ್ಯನ ಸ್ಥಿತಿ ನೋಡಿ ಆನಂದ ಪಟ್ಟರು.ಪದ್ಮಾಸನ ಹಾಕಿ ಸಮಾಧಿಯಲ್ಲಿ ಲೀಲನಾದ. ಚಿದಾನಂದನಿಗೆ ಯಾವ ಪರಿವೆಯೂ ಇಲ್ಲಾ. ಘಟ ಸರ್ಪ ಕೊರಳಲ್ಲಿ ಸುತ್ತಿಕೊಂಡು ಸಾಕ್ಷಾತ್ ಶಿವ ಸ್ವರೂಪದಲ್ಲಿರುವ ಶಿಷ್ಯ ಚಿದಾನಂದನನ್ನು ಕಂಡು “ಭಲೇ – ಭಲೇ ಭಲಾ” ಎಂದರು.ಕೂಡಲೇ ಗುರುಗಳು ಶಿವ ನಾಮ ಸ್ಮರಣೆ ಮಾಡುವಂತೆ ಭಕ್ತ ವೃಂದಕ್ಕೆ ಹೇಳಿದರು. ಗುರುಗಳು ಚಿದಾನಂದನ ಬಳಿ ಸಾರಿ ಕೊರಳಲ್ಲಿನ ಸರ್ಪವನ್ನು ಕೈಯಿಂದ ತೆಗೆದು ದೂರ ಇಟ್ಟರು. ಬಳಿಕ ಶರೀರ ಮುಟ್ಟಿ ನೋಡಿದಾಗ ಬಿಸಿ ಇತ್ತು.

ಚಿದಾನಂದನ ತಲೆಗೆ ಲಿಂಬೆ ಹಣ್ಣಿನ ರಸ ಹಿಂಡಿ ಚೆನ್ನಾಗಿ ತಿಕ್ಕಿ ತಣ್ಣೀರು ಸ್ನಾನ ಮಾಡಿಸಿದರು.”ಚಿದಾನಂದಾ- ಸಾಧನೆ ಮಾಡಿ ಯೋಗ ಸಾಧನೆಯಿಂದ ಸಮಾಧಿ ಸ್ಥಿತಿ ತಲುಪು ಎಂದರೆ ಎರಡು ತಿಂಗಳು ಕಾಲ ಕುಳಿತು ಬಿಡೋದೇ?”ಎನ್ನಲು ಸಮಾದಿಯಿಂದ ಹೊರ ಬಂದ. ಚಿದಾನಂದ ಹರುಷದಿಂದ “ಗುರುದೇವಾ ಗುರುದೇವಾ” ಎಂದು ಕಣ್ಣು ತೆರೆದು ನೋಡಿ ಆನಂದದಿಂದ ಉದ್ಗರಿಸಿದನು. ಚಿದಾನಂದನ ಕಣ್ಣುಗಳನ್ನು ನೋಡಿ ಅವುಗಳು ಒಳಗೆ ಸೇರಿದ್ದವು (ಶಾಂಭವಿ ಮುದ್ರೆ). ಕಣ್ಣು ಗುಡ್ಡೆಗಳು ಹಸುರು ಬಣ್ಣ ತಾಳಿದ್ದವು.ನಾಲ್ಕು ದಿನದಲ್ಲಿ ಎಲ್ಲಾ ಸರಿ ಹೋಗುತ್ತೆ. ಯೋಗಾರೂಢರಾಗಿ ಕುಳಿತವರಿಗೆ ಇದು ಸಾಮಾನ್ಯ. ಎಂದರು. ಶಿಷ್ಯನಿಗೆ ಹಾಲು ಕುಡಿಸಿದರು.

(ಮುಂದುವರಿಯುವುದು)

ಸಂಗ್ರಹ ಸ್ವಾಮಿ ವಿಜಯಾನಂದರು,

ಮೂಲ ಕೃತಿ S.V. ಪಾಟೀಲ ಗುಂಡೂರ ಅವರ “ರಾಜಯೋಗಿ ಶ್ರೀ ಚಿದಾನಂದ ಅವಧೂತರು”.

ಸಂಕಲನ:ಸಿದ್ಧಾರೂಢ ಹಿರೇಮಠ, ನಿತ್ಯಾನಂದ ಧ್ಯಾನ ಮಂದಿರ, ಬೇವಿನಕೊಪ್ಪ.

Share it with the world ~