ಅಯೋದ್ಯಾ ಗ್ರಾಮಕ್ಕೆ ಜಂಕಪ್ಪ ಬರುತ್ತಾನೆ ಗ್ರಾಮದ ಊರ ಹೊರಗೆ ತೋಟದ ನಡುವೆ ಗುರುಗಳ ಆಶ್ರಮವಿತ್ತು. ಪೂರ್ವದಲ್ಲಿ ಹರಿಯುವ ತುಂಗಭದ್ರಾ ನದಿ ಅಲ್ಲಿ ಮುದ್ದಾದ ಮೊಲಗಳು ಹಾಗೂ ನಾಯಿಗಳು ಸ್ನೇಹಿತರಂತೆ ಜೀವಿಸುತ್ತಿದ್ದವು.ಅಲ್ಲಿನ ಮಹಾನ್ ಸಿದ್ದ ಗುರು ಕೊಂಡಪ್ಪನವರು ಮಿತ ಭಾಷಿಗಳಾಗಿದ್ದು, ಸಂಸಾರಿಗಳಾಗಿದ್ದು- ಸನ್ಯಾಸಿಯಂತೆ ಬದುಕುತ್ತಿದ್ದರು. ಕೊಂಡಪ್ಪ ಗುರುಗಳ ಸೇವೆ ಮಾಡ ತೊಡಗಿದನು. ಪೂಜ್ಯ ಕೊಂಡಪ್ಪಜ್ಜನವರು ಕೆಲವೊಮ್ಮೆ ಅವರ ಗುರುಗಳ ಕುರಿತು ಹೇಳುತ್ತಿದ್ದರು.
ಅವರ ಗುರುಗಳಾದ ಶ್ರೀ ಶ್ರೀ ಶಿವಾನಂದ ರಾಜಯೋಗಿಗಳ ಕುರಿತು ಕೊಂಡಪ್ಪಜ್ಜ ಭಾವುಕರಾಗಿ ಅವರ ವಿಷಯ ಹೇಳುತ್ತಿದ್ದರು. ಆನೆಗುಂದಿ ಸಂಸ್ಥಾನದಲ್ಲಿ ಅಗ್ರಗಣ್ಯರೆನಿಸಿದ ಅವಧೂತ ಪರಬ್ರಹ್ಮ ಸ್ವರೂಪಿ ರಾಜಯೋಗಿ 770 ವರ್ಷ ಬಾಳಿ ಬದುಕಿದ ಜೀವನ್ಮುಕ್ತ ಸ್ಥಿತಿಯ ದಿವ್ಯ ಜ್ಞಾನಿಗಳಾಗಿದ್ದರಂತೆ- ಅವರ ಲೀಲೆಗಳು ಅಪಾರ. ಜಂಕಪ್ಪನನ್ನು ಕಂಡು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡ ಕೊಂಡಪ್ಪಜ್ಜ.
ಇವತ್ತು ನನ್ನ ಮಗ ನನಗೆ ದೊರಕಿದ ನನಗೊಬ್ಬ ಉತ್ತಮ ಶಿಷ್ಯ ದೊರಕಿದ ಗುರುವಿನ ಹೆಸರು ತತ್ತ್ವವನ್ನು ಧರೆಯ ಮೇಲೆ ಚಿರ ನೂತನವಾಗಿ ಉಳಿಸಬಲ್ಲ ಸಮರ್ಥ ಶಿಷ್ಯ ರತ್ನ ಈ ಬಾಲಕ ಎಂದು ಹೇಳಿದರು. ಜಂಕಪ್ಪನಿಗೂ ಸ್ತುತಿಪರ ಹೃದಯದಲ್ಲಿ ಪವಿತ್ರ ವಿಚಾರಗಳನ್ನು ಉಕ್ಕಿಸಿ ಸ್ವಾರ್ಥಪರವಾದ ವಿಚಾರಗಳನ್ನು ಚದುರಿಸಿ, ಸತ್ಯ, ಜ್ಞಾನ, ವೈರಾಗ್ಯದ ಘನ ಅರಿವನ್ನು ಪಸರಿಸಿ ಪಶುವನ್ನು ಪಶುಪತಿಯಾಗಿಸಿ ನಿರ್ಭಯ, ನಿರಹಂಕಾರಿಯಾಗಿಸಿ ಧರ್ಮ, ಅರ್ಥ, ಕಾಮ, ಮೋಕ್ಷಗಳಿಗೆ ಅರ್ಥ ಕಲ್ಪಿಸಿ ಹಿನಾಯವಾದ ವ್ಯರ್ಥ ಬದುಕನ್ನು ದೂರೀಕರಿಸಿ ಸುಜ್ಞಾನ ನಿಧಿಯಾದ ಗುರು ಜಂಕಪ್ಪನಿಗೆ ದೊರೆತರು.
ಕೊಂಡಪ್ಪ ಅವಧೂತರು ಜಂಕಪ್ಪನ ತಲೆ ನೇವರಿಸಿ ಪ್ರೀತಿಯಿಂದ, “ಕಂದಾ ಗುರು ಸೇವೆಯಲ್ಲಿ ಗುರು ಆಜ್ಞೆಯಲ್ಲಿ ಸಮಸ್ತವೂ ಅಡಕವಾಗಿದೆ”. ಕಾಯಾ, ವಾಚಾ, ಮನಸಾ, ತ್ರಿಕರಣ ಪೂರ್ವಕವಾಗಿ ಗುರು ಸೇವೆಗೈದೊಡೆ- ಗುರುವೇ ನೀನಾಗುವೆ ಆದರೆ ಈ ದಾರಿ ಅಷ್ಟು ಸುಗಮವಿಲ್ಲಾ. ನೀನು ಮುಂದೆ ಆತ್ಮ ಶಕ್ತಿಯ ತೇಜಸ್ಸಿನಿಂದ ಸುಂದರವಾದ ದಿವ್ಯಾತ್ಮ ಸ್ವರೂಪಿ ಚಿತ್ ಶಕ್ತಿಯಾಗುವೆ, ಪರಬ್ರಹ್ಮ ಸ್ವರೂಪಿಯಾಗುವೆ, ನಾನು ಹೇಳಿದ ಮಾರ್ಗದಲ್ಲಿ ನಡೆದು ಕೆಟ್ಟದು, ಒಳ್ಳೆಯದು ಎಂಬ ಭಾವವನ್ನು ಮೀರಿ ಮನಸ್ಸನ್ನು ಲಯಮಾಡಿ ಅದ್ವೈತವನ್ನು ಸಾಧಿಸಬೇಕು. ಆತ್ಮ ಸಾಕ್ಷಾತ್ಕಾರಕ್ಕಾಗಿ ಹವಣಿಸಿ ನಿರಂತರವಾದ ಸಾಧನೆಯ ಶ್ರೇಷ್ಟವಾದುದು- ಸಿದ್ದಿಗಳು ಸುಲಭ ಸಾಧ್ಯ ಆದರೆ ಮೋಕ್ಷ ಮಾರ್ಗಕ್ಕೆ ಕಠಿಣ ದುಡಿಮೆ ಬೇಕು. ನಿನಗೆ ಸರ್ವಮಂಗಲ ಉಂಟಾಗಲಿ ಎಂದು ಶಿಷ್ಯನನ್ನಾಗಿ ಸ್ವೀಕರಿಸಿದರು.
ಜಂಕಪ್ಪ- ಕೊಂಡಪ್ಪ ಗುರುಗಳ ಆಶೀರ್ವಾದದಿಂದ “ಗುರುಪುತ್ರ” ನಾದನು ಜಗನ್ಮಾತೆಯ ಆಜ್ಞೆಯಂತೆ ಎಲ್ಲೋ ಇದ್ದ ಜಂಕಪ್ಪ ಗುರು ಕೃಪೆಯಿಂದ ಗುರು ಪುತ್ರನಾದನು.
(ಮುಂದುವರಿಯುವುದು)
ಸಂಗ್ರಹ ಸ್ವಾಮಿ ವಿಜಯಾನಂದರು,ಮೂಲ ಕೃತಿ S.V. ಪಾಟೀಲ ಗುಂಡೂರ ಅವರ “ರಾಜಯೋಗಿ ಶ್ರೀ ಚಿದಾನಂದ ಅವಧೂತರು”.
ಸಂಕಲನ:ಸಿದ್ಧಾರೂಢ ಹಿರೇಮಠ, ನಿತ್ಯಾನಂದ ಧ್ಯಾನ ಮಂದಿರ, ಬೇವಿನಕೊಪ್ಪ.