ಅಧ್ಯಾಯ 6: ಚಿದಾನಂದನಾದ ಜಂಕಪ್ಪ!

ಲಕ್ಷ್ಮೀಪತಿಯ ಮಗ ಜಂಕಪ್ಪ ಕೊಂಡಪ್ಪ ಗುರುಗಳ ಗುರುಪುತ್ರನಾದನು.”ಅಪುತ್ರಸ್ಯ ಗತಿರ್ನಾಸ್ತಿ” ಎಂಬ ಹಿರಿಯರ ವಾಣಿ ಎಷ್ಟು ಸತ್ಯ. ಅರಿವಿನ ಪುತ್ರ ಅಥವಾ ಗುರುಪುತ್ರನಾಗದವನಿಗೆ ಮೋಕ್ಷವಿಲ್ಲವೆಂಬ ನುಡಿ ಸತ್ಯವಾಗಿದೆ. ಅರಿವಿನ ಪುತ್ರನಿಂದ ಈ ಪವಿತ್ರ ನೆಲ ಜಲದ ಸಂಸ್ಕೃತಿಗೆ ಬೆಲೆ ಬರುತ್ತದೆ. “ಯಾವುದು ಹೌದು ಅದು ಅಲ್ಲ, ಯಾವುದು ಅಲ್ಲ ಅದು ಹೌದು” ಎಂಬ ಅವಧೂತ ವಾಣಿಗೆ ಹಲವುರೀತಿಯ ಅರ್ಥವಿದೆ. ನಾವು ಹೌದು ಎಂಬುದು ಅವಧೂತನಿಗೆ “ಅಲ್ಲ”. ನಾವು ಅಲ್ಲವೆಂಬುದನ್ನು ಅವಧೂತ ಹೌದು ಎಂದು ಸಾಧಿಸುತ್ತಾರೆ.

ಆದರೆ ಅವಧೂತ ಮಹಾತ್ಮರು ತಮ್ಮ ಶಿಷ್ಯನಿಗೆ ಯಾವುದು ಅಲ್ಲವೆಂದು ತಿರಸ್ಕರಿಸುತ್ತಾರೆಯೋ ಅದನ್ನು “ಹೌದು” ಎಂದು ಮಾಡಲು ಹೊರಟ ಶಿಷ್ಯನಿಂದ ಸಂಸ್ಕೃತಿಯೇ ನಷ್ಟವಾಗುತ್ತದೆ. ಆ ಪರಮ ಸತ್ಯದ ಅರ್ಥ ಹಾಗೂ ದರ್ಶನವಾಗಲು ಜಗನ್ಮಾತೆ ತನ್ನ ಆಜ್ಞೆಯಿಂದ ಎಲ್ಲೋ ಇದ್ದ ಜಂಕಪ್ಪನನ್ನು ಮಹಾನ್ ಗುರು ಕೊಂಡಪ್ಪಜ್ಜನ ಮಗನಾಗಿರುವಂತೆ ಗುರುಪುತ್ರನನ್ನಾಗಿ ಮಾಡಿದಳು.

ಜಂಕಪ್ಪನು ಗುರು ಸೇವೆ ಮಾಡುತ್ತಾ ಗುರು ಕೃಪೆಗೆ ಪಾತ್ರನಾಗಿದ್ದನು. ಹೆಚ್ಚಿನ ಸಮಯ ಗುರುಸೇವೆ ಮುಗಿದಾಗ ಧ್ಯಾನಾಸಕ್ತನಾಗುತ್ತಿದನು. ಬೇರೆ ಶಿಷ್ಯರು ಜಂಕಪ್ಪನನ್ನು ಪ್ರೀತಿಸುತ್ತಿದ್ದರು.ಗುರುಗಳು ವಿಶ್ರಾಂತಿ ಮಾಡುವಾಗ ಜಂಕಪ್ಪ ಹೊಳೆಯ ದಂಡೆಗೆ ಹೋಗುತ್ತಿದ್ದನು. ಯಾವ ರೀತಿ ನದಿಯ ದಂಡೆಯಲ್ಲಿ ಹಳೆಯ ಹಿತೈಷಿ ಲಕ್ಷ್ಮವ್ವ ಬಂದು ಜಂಕಪ್ಪನಿಗೆ ಮನೆಯಿಂದ ಊಟದ ಬುತ್ತಿ ತಂದು ಉಣಿಸುತ್ತಿದ್ದಳು. ಈ ವಿಷಯ ತ್ರಿಕಾಲ ಜ್ಞಾನಿಗಳಾದ ಗುರು ಅವಧೂತ ಕೊಂಡಪ್ಪಜ್ಜನಿಗೆ ತಿಳಿಯಿತು. ಲಕ್ಷ್ಮವ್ವ ಊಟ ಕೊಡುತ್ತಿದ್ದ ವಿಷಯ ಕೇಳಿ “ಒಳ್ಳೆಯದು ಆ ತಾಯಿಯ ಅಂತಃಕರಣ ದೊಡ್ಡದು. ತಾಯಿ ಋಣ, ಗುರು ಋಣ ತೀರಿಸಲು ಅಸಾಧ್ಯವಾದುದು.”ನಿನಗೆ ಬುತ್ತಿ ಉಟ ಕೊಡುವಾಕೆ ನನ್ನಲ್ಲಿಗೆ ಕಳಿಸಿದಾಕೆ ಜಗನ್ಮಾತೆ ಸಕಲ ಜೀವಿಗಳಿಗೆ ಅನ್ನ ಕೊಡುವ, ಎಲ್ಲರನ್ನೂ ಸಲಹುವಾಕೆ ಆ ಮಾತೆ. ಈ ಗುರು ಮನೆಯ ಆಶ್ರಮದ , ಮಠಗಳ, ಪ್ರಸಾದವೂ ಆಕೆಯ ಕೃಪೆಯಿಂದ ನಡೆಯುತ್ತದೆ.

ಆಕೆ ನೀಡುವ ಬುತ್ತಿ ಊಟ ಬೇರೆ? ಗುರುವಿನ ಮನೆಯ ಊಟ ಬೇರೆ ಎಂದು ಎರಡೆಣಿಸಬೇಡಾ. ಇಂದಿನಿಂದ ಆಶ್ರಮದ ಪ್ರಸಾದವನ್ನೇ ಸ್ವೀಕರಿಸಬೇಕು ಎಂದರು. “ಆಗಲಿ ತಂದೆ ತಮ್ಮ ಅಪ್ಪಣೆ ಪಾಲಿಸುವೆ” ಜಂಕಪ್ಪ ಹಾಗೆ ಮಾಡಿದನು. ಜಂಕಪ್ಪ ಆಲಸ್ಯ , ನಿದ್ರೆ ಮರೆತು ಗುರು ಸೇವೆಯಲ್ಲಿ ತೊಡಗಿದನು. ಒಂದು ದಿನ ಪೂರಾ ರಾತ್ರಿ ನಿದ್ದೆ ಇಲ್ಲದೆ. ಗುರುವಿನ ಪಾದಗಳನ್ನು ಒತ್ತುತ್ತಾ ಕುಳಿತಿದ್ದನು. ಕಂಗಳು ಮುಚ್ಚಿದ್ದವು. ಇಡೀ ದೇಹ ಜಾಗ್ರತವಾಗಿತ್ತು. ಬಾಯಿಯಿಂದ ಗುರು ಸ್ಮರಣೆ, ನಾಮ ಸ್ಮರಣೆ ಹೊರ ಹೊಮ್ಮುತ್ತಿತ್ತು. ಸತ್, ಚಿತ್, ಆನಂದ ಸ್ವರೂಪನಾದ ಶಿಷ್ಯೋತ್ತಮನ ಸೇವೆಯಿಂದ ತೃಪ್ತನಾದ ಅವಧೂತ ಗುರುಗಳು ಅವನ ತಲೆಯ ಮೇಲೆ ಕೈಯಿಟ್ಟು “ಚಿದಾನಂದ” ಎಂದು ಕರೆದರು. ಇಂದಿನಿಂದ ನೀನು ಜಂಕಪ್ಪನಲ್ಲಾ ಕಂದಾ ನೀನು ಚಿದಾನಂದ, ಚಿದಾಕಾಶ ರೂಪಿ ಚಿದಾನಂದ, ಚಿದಾನಂದ ಎಂದರು. ಅಂದಿನಿಂದ ಅಯೋದ್ಯ, ಹೆಬ್ಬಾಳ, ಡಣಾಪುರ, ಕಂಪ್ಲಿ, ಗಂಗಾವತಿ ಸುತ್ತು ಎಲ್ಲಾ ಭಕ್ತ ಪರಿವಾರಕ್ಕೆ ಜಂಕಪ್ಪ- ಚಿದಾನಂದನಾದನು.ಅಲ್ಲಿಂದ ಆಶ್ರಮದಲ್ಲಿ ಕುಳಿತು ಬಗಳಾಮುಖಿಯ ಕುರಿತು ಪದ್ಯಗಳನ್ನು ಬರೆಯ ತೊಡಗಿದನು. ಅದನ್ನು ಯಾರಿಗೂ ತೋರಿಸುತ್ತಿರಲಿಲ್ಲಾ. ಅವನು ಬರೆಯುತ್ತಿರಲಿಲ್ಲಾ. ಒಂದು ಅವ್ಯಕ್ತ ಶಕ್ತಿ ಅದನ್ನು ಬರೆಸುತ್ತಿತ್ತು.

(ಮುಂದುವರಿಯುವುದು)

ಸಂಗ್ರಹ ಸ್ವಾಮಿ ವಿಜಯಾನಂದರು,

ಮೂಲ ಕೃತಿ S.V. ಪಾಟೀಲ ಗುಂಡೂರ ಅವರ “ರಾಜಯೋಗಿ ಶ್ರೀ ಚಿದಾನಂದ ಅವಧೂತರು”.

ಸಂಕಲನ:ಸಿದ್ಧಾರೂಢ ಹಿರೇಮಠ, ನಿತ್ಯಾನಂದ ಧ್ಯಾನ ಮಂದಿರ, ಬೇವಿನಕೊಪ್ಪ.

Share it with the world ~