ಚಿದಾನಂದನು ಸಾಧನೆ ಮಾಡುತ್ತಾ, ಮಾಡುತ್ತಾ, ಯಾವ ರೀತಿ ತುಪ್ಪವನ್ನು ತಿಂದ ನಾಲಗೆ ತುಪ್ಪವನ್ನು ಅಂಟಿಸಿಕೊಳ್ಳುವುದಿಲ್ಲವೋ ಹಾಗೆಯೇ ಸಂಸಾರದಲ್ಲಿದ್ದು ಇಲ್ಲದಂತಿದ್ದರೂ, ಭಕ್ತಾಭಿಮಾನಿಗಳು ಚಿದಾನಂದನ ಮದುವೆಯ ಪ್ರಸ್ತಾಪ ಗುರುಗಳಲ್ಲಿ ಹೇಳುತ್ತಿದ್ದರು.
ಗುರುಗಳು “ಚಿದಾನಂದಾ ನೀನು ಹಠಯೋಗಿ, ರಾಜಯೋಗಿ ಸಮಾಧಿ ಸ್ಥಿತಿಯಲ್ಲಿ ನಿನಗೆ ಸರಿಸಮಾನರು ಆಗಿರುವವರು ಯಾರು ಇಲ್ಲ.ನೀನು ಎಲ್ಲವನ್ನೂ ಜಯಿಸಿರುವೆ. ಈಗ ಸ್ಥೂಲವಾದ ಮಾನವ ನಿರ್ಮಿತ ಯೋಗವನ್ನು ತ್ಯಾಗ ಮಾಡು. ಪರಬ್ರಹ್ಮವೆ ತಾನೆಂದು ತಿಳಿದ ಮೇಲೆ ಸಾಧನೆಯ ಅವಶ್ಯಕತೆ ಎಕೆ? ಇನ್ನು ಸಾಕು ಮಾಡು ತಾಯಿಯ ಸಂಕಲ್ಪ ಅನೇಕವಿದೆ. ಅದನ್ನು ನೆರವೇರಿಸಬೇಕಾಗಿದೆ.
ಢಣಾಪುರದ ಹಿರಿಯರ ಜೊತೆ ಸೇರಿ ಚಿದಾನಂದಾ, ನಿನ್ನ ಮದುವೆಯ ಬಗ್ಗೆ ಮಂದಿ ಕೇಳುತ್ತಾರೆ, ಎಂದಾಗ.
ಚಿದಾನಂದನು ಕೈ ಮುಗಿದು ವೈರಾಗ್ಯ ಶಸ್ತ್ರದಿಂದ ಹೊರಾಡಿ ವಿಷಯ ಲಾಲಸೆಯುಳ್ಳ ಮನಸ್ಸು ತಣಿಸಿದವನು ನಾನು. ನನಗೆ ಈ ಪ್ರಪಂಚದಲ್ಲಿ ಸ್ತ್ರೀಯರೆಲ್ಲರೂ ತಾಯ ಸಮಾನರು. ಎಲ್ಲಾ ಮಾತೆಯಯರು ಬಗಳಾಂಬಿಕೆಯ ಪ್ರತೀಕವೆಂಬುದು ನನ್ನ ಭಾವನೆ. ಆಕಾಶದೆತ್ತರ ಒಯ್ದು ಅಲ್ಲಿಂದ ಒಮ್ಮೆಗೇ ಭೂಮಿಗೆ ಬಿಟ್ಟಂತೆ ಮಾಡದಿರಿ ಗುರುದೇವಾ, ಎಂದು ಅಂಗವಾಚಿ ಬೇಡಿದನು. ಆದರೆ ಹಿರಿಯರು ಈ ಗುಂಗು ಬಿಡಲಿಲ್ಲಾ ಎಲ್ಲರೂ ರಾತ್ರೆ ಮಲಗಿದ್ದರು. ಲೋಕ ಕಲ್ಯಾಣಕ್ಕಾಗಿ ಚಿದಾನಂದ ಆಶ್ರಮದಿಂದ ಹೊರಟನು.
ಮುಂಜಾನೆ ಗುರುಗಳು ಚಿದಾನಂದಾ ಎಂದು ಕರೆದಾಗ ಉತ್ತರ ಬರಲಿಲ್ಲಾ ಗುರುಗಳ ದಿಂಬಿನ ಹತ್ತಿರ ತಾಳೆಗೆರಿಯಲ್ಲಿ ಬರಹ ಕಂಡಿತು.ಗುರುದೇವಾ ಕ್ಷೆಮೆಯಿರಲಿ ತಮ್ಮ ಆಶೀರ್ವಾದ ಬಲವಿದೆ. ನಾನು ತಮ್ಮಪ್ಪಣೆ ಪ್ರಕಾರ ಮುಂದಿನ ಕಾರ್ಯಕ್ಕೆ ಅಣಿಯಾಗಲು ಪ್ರಯಾಣಿಸಿರುವೆ. ಗುರುಗಳಿಗೆ ಸಂತಸ ದುಃಖ ಎರಡೂ ಆಗಿತ್ತು. ಚಿದಾನಂದ ಅಯೋದ್ಯೆ ಪುರದಲ್ಲಿ ಉಳಿಯಬೇಕೆಂಬ ಉದ್ದೇಸದಿಂದ ಅವನಿಗೆ ವಿವಾಹ ಮಾಡಲು ಭಕ್ತಾಬಿಮಾನಿ ಹಿರಿಯರು ಆಸೆ ಪಟ್ಟಿದ್ದರು.ಚಿದಾನಂದ ನಡೆಯುತ್ತಾ ರವುಡ ಕುಂದಾ ಗ್ರಾಮದ ಗವಿಯನ್ನು ಸೇರಿದನು.
ರವುಡ ಕುಂದಾ ಗ್ರಾಮದ ಬಂಡೇ ರಂಗನಾಥ ಸ್ವಾಮಿಯ ದೇವಾಲಯದಲ್ಲಿ ರಂಗನಾಥನ ಸನ್ನಿದಿಯಲ್ಲಿ ತಂಗಿದನು. ಸ್ವಪ್ನದಲ್ಲಿ ಗುರುಗಳು ದರ್ಶನ ನೀಡಿ ಮುಂದೆ ಎಲ್ಲಿಯೂ ಸಂಚರಿಸದೆ ಅಲ್ಲೆಯೇ ಸಮೀಪದಲ್ಲಿ ನೆಲೆಸಿರುವ ಬಗಳಾಂಬ ದೇವಿಯ ಸೇವೆ ಗೈದು ಅಲ್ಲಿ ನೆಲಸು, ಅಲ್ಲಿಯೇ ಚಿದಾನಂದಾವಧೂತ ಎಂಬ ನಾಮಾಭಿಮಾನದಿಂದ ಲೋಕ ವಿಖ್ಯಾತಿ ಹೊಂದು ಎಂದರು.
ಗುರುಗಳ ನಾಮಸ್ಮರಣೆ ಮಾಡುತ್ತಾ, ಚಿದಾನಂದನು ಧ್ಯಾನಾಸಕ್ತನಾದನು. ರಾತ್ರೆ ಸ್ವಪ್ನದಲ್ಲಿ ಬಗಳಾಮುಖಿ ದೇವಿ ಪ್ರತ್ಯಕ್ಷವಾಗಿ ದರುಶನ ನೀಡಿದಳು. ದೇವಿ ಹೇಳಿದಳು, “ನಾನು ಇಲ್ಲಿಂದ ಒಂದು ಹರದಾರಿ ಅಂತರದಲ್ಲಿ ಪೂರ್ವ ದಿಕ್ಕಿನಲ್ಲಿರುವ ಬೆಟ್ಟ ಗುಡ್ಡದ ನಡುವಿರುವ ಸಿದ್ದ ಪರ್ವತದಲ್ಲಿ ನೆಲೆಸಿರುವೆ, ಬಂದು ಬಿಡು” ಎಂದಳು.ಮರುದಿನ ಚಿದಾನಂದನು ಸಿದ್ದ ಪರ್ವತ ತಲುಪಿದನು. ಅದು ಸುಂದರವಾದ ನಯನ ಮನೋಹರವಾದ ದಿವ್ಯ ಸ್ಪಂದನದ ಸಿದ್ದ ಲೋಕವಾಗಿತ್ತು. ಅಲ್ಲಿ ಗುಹೆಯಲ್ಲಿ ನೆಲೆಸಿ ಸಿದ್ದೇಶ್ವರ ಚಿದಾನಂದೇಶ್ವರ ಎಂಬ ಶಿವಲಿಂಗ ಪ್ರತಿಷ್ಟಾಪಿಸಿ ಬಗಳಾಂಬಾ ಪುಷ್ಕರಣೆ, ಬ್ರಹ್ಮ ತೀರ್ಥ, ಕೋಟಿ ತೀರ್ಥಗಳನ್ನು ಭಕ್ತರ ಉಧ್ದಾರಕ್ಕಾಗಿ ನಿರ್ಮಿಸಿದನು.ನಿರಾಕಾರ, ಅದೃಶ್ಯ ರೂಪಿತಳಾಗಿ ತನಗೆ ದರುಶನವಿತ್ತ ಬಗಳಾಮುಖಿ ದೇವಿಯ ನಿರಾಕಾರ ಶಕ್ತಿಯನ್ನು ಸಿದ್ದ ಪರ್ವತದಲ್ಲಿ ಸ್ಥಾಪಿಸಿ ತಮ್ಮ ಹಸ್ತದಿಂದಲೇ ಶ್ರೀ ಚಕ್ರವನ್ನು ಪ್ರತಿಷ್ಟಾಪಿಸಿದರು.
ಅವರ ಸದ್ಗುರುಗಳಿಗೆ ಚಿದಾನಂದನು ಸಿದ್ದ ಪರ್ವತದಲ್ಲಿ ನೆಲೆಸಿದ ವಿಷಯ ತಿಳಿದು ಶರೀರ ಕೃಶವಾದುದರಿಂದ ಚಕ್ಕಡಿ ಏರಿ ಸಿದ್ದ ಪರ್ವತಕ್ಕೆ ಬಂದರು.ಚಿದಾನಂದನಿಗೆ ಗುರುಗಳನ್ನು ಕಂಡು ಸ್ವರ್ಗ ಮೂರೇ ಗೇಣು ಎಂಬಂತಾಯಿತು. ಅವರನ್ನು ಅಲ್ಲೇ ನೆಲೆಸುವಂತೆ ಮಾಡಿ ಚಿದನಂದಾವಧೂತರು ಅವರ ಸೇವೆ ಮಾಡ ತೊಡಗಿದರು.ಅವಧೂತ ಕೊಂಡಪ್ಪಜ್ಜ ತನ್ನ ಶಿಷ್ಯನ ಸೇವೆಯಿಂದ ತ್ವಪ್ತರಾಗಿ. ಅವನ ಗ್ರಂಥಗಳನ್ನು ಓದುತ್ತಾ ಆನಂದದಿಂದ ಅಲ್ಲಿಯೇ ಕೊನೆಗೆ ಅಂಬಾ ಬೆಟ್ಟವೆಂಬ ಭಗಳಾಮುಖಿ ಕ್ಷೇತ್ರದಲ್ಲಿ ಪರಬ್ರಹ್ಮದಲ್ಲಿ ಐಕ್ಯರಾದರು.
ಚಿದಾನಂದಾವಧೂತರು ಅನೇಕ ತಿಂಗಳುಗಳ ಕಾಲ ಯೋಗಾ ರೂಡರಾಗಿ ಕುಳಿತಾಗ ಅವರ ದೇಹದ ಉಷ್ಣತೆ ಏರುತ್ತಿತ್ತಂತೆ. ಸಮಾದಿಯಿಂದ ಇಳಿದ ಮೇಲೆ ಭಕ್ತರು ಅವರ ಪಾದ ಪೂಜೆ ಮಾಡಿದಾಗ ಆ ನೀರು ಬಿಸಿಯಾಗಿದ್ದು ಸರ್ವರೋಗ ನಿವಾರಣೆ ಮಾಡುವ ಶಕ್ತಿ ಆ ನೀರಿನಲ್ಲಿರುತ್ತಿತ್ತು ಎನ್ನುತ್ತಾರೆ.
ಭೂತ, ವರ್ತಮಾನ, ಭವಿಷ್ಯತ್ ಕಾಲದ ಅನೇಕ ವಿದ್ಯಾಮಾನಗಳನ್ನು ತಿಳಿಸುತ್ತಾ, ನಿತ್ಯವೂ ತಾಯಿಯ ಪೂಜೆ ನೆರವೇರುವಂತೆ ಮಾಡಿ ಅಯೋದ್ಯೆಯಲ್ಲಿದ್ದಾಗ, ಬರೆದ ತಾಳೆಯಗರಿಯ ಕಟ್ಟುಗಳನ್ನು ಸಂಗ್ರಹಿಸಿ- ಆ ಗ್ರಂಥವನ್ನು ಪೂರ್ಣಗೊಳಿಸಿ ಅದಕ್ಕೆ ಜ್ಞಾನಸಿಂಧು ಎಂದು ಹೆಸರಿಟ್ಟರು.
ಹಾಗೆಯೇ ದೇವಿಯ ಮಹಿಮೆಯನ್ನು ಸಾರುವ ದೇವಿಯ ಪುರಾಣವೇ ದೇಹ ಪುರಾಣವೆಂದು ತಿಳಿಸಿ ಅದನ್ನು ವಿವರವಾಗಿ ಬರೆದು ಲೋಕಪಾವನ ಚರಿತೆಯೆನಿಸಿದ ದೇವಿ ಪುರಾಣವೆಂಬ ಶ್ರೇಷ್ಟ ಗ್ರಂಥ ರಚಿಸಿದರು. ಬಗಳಾಮುಖಿ ದೇವಿ ಅವರಿಂದ ಬರೆಸಿದ್ದು ಎನ್ನುತ್ತಾರೆ. ಭಕ್ತಾಭಿಮಾನಿಗಳು ಎರಡು ಗ್ರಂಥಗಳನ್ನು ಮುದ್ರಿಸಿ ಸುಜ್ಞಾನಿಗಳು ಅದರ ಪ್ರಚಾರ ಮಾಡಿದರು. ಹೀಗಾಗಿ ಚಿದಾನಂದರ ಕೀರ್ತಿ ಎಲ್ಲೆಡೆ ಪಸರಿಸಿತು.
ಅನೇಕ ನಾಸ್ತಿಕರನ್ನು ಆಸ್ತಿಕನ್ನಾಗಿಸಿ ಅವರನ್ನು ಸಂನ್ಮಾರ್ಗಕ್ಕೆ ಕೊಂಡೊಯ್ದಿದ್ದಾರೆ. ಈ ನಿಟ್ಟಿನಲ್ಲಿ ಅವಧೂತ ಪರಂಪರೆ ಮುಂದುವರಿಯಲು “ಜ್ಞಾನ ಸಿಂಧು” ಒಂದು ದಾರಿ ದೀಪವಾಗಿ ಬೆಳಗುತ್ತಿದೆ.ಹೀಗೆ ಲೋಕೊದ್ದಾರ ಮಾಡುತ್ತಾ ಶಕೆ 1703ರ ಪ್ಲವ ಸಂವತ್ಸರ ಕ್ರಿ.ಶ 1781 ರಂದು ಸರ್ವ ಜನರ ಸಮ್ಮುಖದಲ್ಲಿ ಜೀವ ಸಮಾದಿ ಪಡೆದರು. ಬಗಳಾಂಬಿಕಾ ದೇವಿಯ ಎದುರಿಗೆ ಎಡಗಡೆ ಯಲ್ಲಿ ಅವರು ಸಮಾದಿ ಹೊಂದಿದರು.ಕನಕಗಿರಿಯಲ್ಲಿ ಸಮಾದಿ ಪಡೆದರು ಅಂತ ಕೆಲವರು ಹೇಳುತ್ತಾರೆ.ಅವರ ಗದ್ದುಗೆ ಎಲ್ಲೇ ಇರಲಿ ಚಿದಾನಂದಾವಧೂತರು ತಮ್ಮ ಅಮರ ಕೃತಿಗಳ ಮೂಲಕ ಕನ್ನಡ ಭಕ್ತಭಿಮಾನಿಗಳ ಹೃದಯ ಗದ್ದುಗೆಯಲ್ಲಂತೂ ಜೀವಂತವಾಗಿದ್ದಾರೆ.ಅಂತೂ ಚಿದಾನಂದ ವೆಂಬ ಅದ್ಬುತ ತತ್ವ ಶಕ್ತಿ ಪರಬ್ರಹ್ಮ ದಲ್ಲಿ ಲೀನವಾಯಿತು. ಅವರ ಕೊನೆಯ ಮಾತುಗಳಲ್ಲಿ ಹೇಳಿದಂತೆ,ಕ್ಷೀರದೊಳು ಕ್ಷೀರವಡಗಿದಂದದಿ,ನೀರೊಳಗೆ ನೀರಡಗಿದಂದದಿ, ಚಾರು ಸಕ್ಕರೆಯೊಳಗೆ ಸಕ್ಕರೆ ಕೂಡಿಕೊಂಡಂತೆ. ಚಿದಾಕಾಶರೂಪಿ ಪರಬ್ರಹ್ಮಾದಲ್ಲಿ ಐಕ್ಯರಾದರು.
(ಮುಂದುವರಿಯುವುದು)
ಸಂಗ್ರಹ ಸ್ವಾಮಿ ವಿಜಯಾನಂದರು,
ಮೂಲ ಕೃತಿ S.V. ಪಾಟೀಲ ಗುಂಡೂರ ಅವರ “ರಾಜಯೋಗಿ ಶ್ರೀ ಚಿದಾನಂದ ಅವಧೂತರು”.
ಸಂಕಲನ:ಸಿದ್ಧಾರೂಢ ಹಿರೇಮಠ, ನಿತ್ಯಾನಂದ ಧ್ಯಾನ ಮಂದಿರ, ಬೇವಿನಕೊಪ್ಪ.